ಅಮೆರಿಕದ ವ್ಯಾಪಾರ ಸಲಹೆಗಾರ ಪೀಟರ್ ನವಾರೊ ಹಾಗೂ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್
ಜೈಸ್ವಾಲ್ ಕೃಪೆ: ರಾಯಿಟರ್ಸ್ ಹಾಗೂ ಪಿಟಿಐ
ನವದೆಹಲಿ: ಅಮೆರಿಕದ ವ್ಯಾಪಾರ ಸಲಹೆಗಾರ ಪೀಟರ್
ನವಾರೊ ಅವರು ಮಾಡಿರುವ ಆರೋಪಗಳಿಗೆ ಶುಕ್ರವಾರ ತಿರುಗೇಟು ನೀಡಿರುವ ಭಾರತ, ಆರೋಪಗಳೆಲ್ಲ ‘ದೋಷಪೂರಿತ ಹಾಗೂ ದಾರಿ ತಪ್ಪಿಸುವಂಥವು’ ಎಂದು ಹೇಳಿದೆ.
ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುತ್ತಿರುವುದನ್ನು ಟೀಕಿಸಿದ್ದ ನವಾರೊ, ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾಗೆ ಭಾರತ ಹಣಕಾಸು ನೆರವು ನೀಡುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ನವಾರೊ ಅವರು ಮಾಡಿರುವ ದೋಷಪೂರಿತ ಹಾಗೂ ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ಗಮನಿಸಿದ್ದೇವೆ. ಅವನ್ನೆಲ್ಲ ಸ್ಪಷ್ಟವಾಗಿ ಅಲ್ಲಗಳೆಯುತ್ತೇವೆ’ ಎಂದಿದ್ದಾರೆ.
‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವನ್ನು ಅಮೆರಿಕವು ತನ್ನ ರಾಜತಾಂತ್ರಿಕ ಪಾಲುದಾರ ರಾಷ್ಟ್ರವನ್ನಾಗಿ ಪರಿಗಣಿಸುವುದಾದರೆ ಅದಕ್ಕೆ ತಕ್ಕಂತೆ ವರ್ತಿಸಬೇಕು’ ಎಂದು ತೀಕ್ಷ್ಮವಾಗಿ ಹೇಳಿದ್ದಾರೆ.