Mysuru Dasara: ‘ಯುವ ದಸರಾ’ ಉದ್ಘಾಟನೆಗೆ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಗೆ ಆಹ್ವಾನ!

2 Min Read

Mysuru Dasara: ‘ಯುವ ದಸರಾ’ ಉದ್ಘಾಟನೆಗೆ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಗೆ ಆಹ್ವಾನ!

ದಸರಾದ ಪ್ರಮುಖ ಆಕರ್ಷಣೆಯಾದ ಯುವ ದಸರಾ-2026ರ ಉದ್ಘಾಟನಾ ಕಾರ್ಯಕ್ರಮಕ್ಕೆ ಮೈಸೂರಿನವರೇ ಆದ ಭಾರತದ ಮೈಕೆಲ್ ಜಾಕ್ಸನ್ ಖ್ಯಾತಿಯ ಚಲನಚಿತ್ರ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2026ಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ. ಈ ಬಾರಿ ಅದ್ದೂರಿ ಹಾಗೂ ವಿಭಿನ್ನವಾಗಿ ನಾಡಹಬ್ಬ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ತಯಾರಿ ಕಾರ್ಯಗಳು ಬಿರುಸುಗೊಂಡಿವೆ.

ದಸರಾದ ಪ್ರಮುಖ ಆಕರ್ಷಣೆಯಾದ ಯುವ ದಸರಾ-2026ರ ಉದ್ಘಾಟನಾ ಕಾರ್ಯಕ್ರಮಕ್ಕೆ ಮೈಸೂರಿನವರೇ ಆದ ಭಾರತದ ಮೈಕೆಲ್ ಜಾಕ್ಸನ್ ಖ್ಯಾತಿಯ ಚಲನಚಿತ್ರ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ

ಯುವ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಜಿ. ಸೋಮಶೇಖರ್, ಕಾರ್ಯದರ್ಶಿಗಳಾದ ಅರುಣ್ ಹಾಗೂ ಸತ್ಯಮೂರ್ತಿ ಅವರು ಚೆನ್ನೈನಲ್ಲಿರುವ ಪ್ರಭುದೇವ ಅವರ ನಿವಾಸದಲ್ಲಿ ಆಹ್ವಾನ ನೀಡಿದರು.

ಮೈಸೂರು ಸಂಸ್ಥಾನದ ಪರಂಪರೆಯ ಸೊಬಗನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಪೇಟಾ ತೊಡಿಸಿ, ರೇಷ್ಮೆ ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವ ಸಲ್ಲಿಸಿ ಆಹ್ವಾನ ನೀಡಲಾಗಿದೆ. ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ ಪ್ರಭುದೇವ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಮೈಸೂರಿನವರೇ ಆದ ಅವರ ಆಗಮನವು ಯುವ ದಸರಾ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಭುದೇವ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಅವರ ನೃತ್ಯ ಶೈಲಿ ಹಾಗೂ ವೇದಿಕೆ ಪ್ರದರ್ಶನ ಯುವಜನತೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಪ್ರತಿ ವರ್ಷ ಯುವ ದಸರಾ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಸಂಗೀತಗಾರರು, ನೃತ್ಯಪಟುಗಳು ಹಾಗೂ ಯುವ ಕಲಾವಿದರು ಭಾಗವಹಿಸುವ ಹಿನ್ನೆಲೆಯಲ್ಲಿ, ಪ್ರಭುದೇವ ಅವರ ಉಪಸ್ಥಿತಿಯಿಂದ ಈ ಬಾರಿಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಸಿಗುವ ನಿರೀಕ್ಷೆ ಮೂಡಿದೆ.

2026ರ ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿದೆ. ದಸರಾ ಉದ್ಘಾಟನೆ ಅಕ್ಟೋಬರ್ 11ರಂದು ನಡೆಯಲಿದೆ. ಆದರೆ ಯುವ ದಸರಾ ಕಾರ್ಯಕ್ರಮದ ನಿಖರ ದಿನಾಂಕ, ಸಂಪೂರ್ಣ ವೇಳಾಪಟ್ಟಿ ಹಾಗೂ ವೇದಿಕೆಯ ಕುರಿತು ಅಂತಿಮ ಅಧಿಕೃತ ಮಾಹಿತಿ ಇನ್ನೂ ಪ್ರತ್ಯೇಕವಾಗಿ ಪ್ರಕಟವಾಗಬೇಕಿದೆ.

ಪ್ರಭುದೇವಗೆ ಮೈಸೂರಿನ ನಂಟು: ಪ್ರಭುದೇವ ಅವರ ತಂದೆ ಮುಗೂರು ಸುಂದರ್ ದಕ್ಷಿಣ ಭಾರತೀಯ ಚಲನಚಿತ್ರರಂಗದಲ್ಲಿ ಹೆಸರಾಂತ ನೃತ್ಯ ಸಂಯೋಜಕರಾಗಿದ್ದು, ತಾಯಿ ಮಹದೇವಮ್ಮ ಸುಂದರ್. ತಾಯಿ ಮಹದೇವಮ್ಮ ಅವರು ಮೈಸೂರಿನಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿರುವ ದೂರ ಗ್ರಾಮದವರು.

ಪ್ರಭುದೇವ ಅವರ ಕುಟುಂಬಕ್ಕೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೆಂಬಾಳು ಗ್ರಾಮದೊಂದಿಗೆ ಆಳವಾದ ಸಂಬಂಧವಿದೆ. ಅಲ್ಲಿನ ಮಲೆ ಮಹದೇಶ್ವರ ದೇವಸ್ಥಾನವನ್ನು ತಾಯಿಯ ಆಸೆಯಂತೆ ಅವರು ಸುಮಾರು 25 ಲಕ್ಷ ರೂಪಾಯಿ ವೆಚ್ಚ ಮಾಡಿ ಜೀರ್ಣೋದ್ಧಾರ ಮಾಡಿಸಿದ್ದಾರೆ ಮತ್ತು ಕುಟುಂಬದೊಂದಿಗೆ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅವರು ದೂರ ಗ್ರಾಮದಲ್ಲಿ ಸ್ವಂತ ಆಸ್ತಿ ಮತ್ತು ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

error: Content is protected !!